Me

ನಿಮ್ಮ ಜೊತೆ ಪುರೋಹಿತರಿದ್ದಂತೆ!.

ಶ್ರೀ ಮಹಾಲಕ್ಷ್ಮೀ ಪೂಜೆ


ಶ್ರೀ ಲಕ್ಶ್ಮೀ ಪೂಜೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಈ ಕೆಳಗಿನಂತೆ ಸಿದ್ಧಮಾಡಿಕೊಂಡು ನಂತರ ಪೂಜೆ ಪ್ರಾರಂಭಿಸಿ.

ಅಂಗಡಿ ಅಥವಾ ಪೂಜೆ ಮಾಡುವ ಕಾರ್ಯಸ್ಥಾನವನ್ನು ಸ್ವಚ್ಛಮಾಡಿ. ರಂಗೋಲಿ, ತೋರಣಗಳು, ಹಾರಗಳಿಂದ ಅಲಂಕರಿಸಿ. ಹೊಸದಾಗಿ ಸುಣ್ಣಬಣ್ಣವನ್ನೂ ಮಾಡಬಹುದು.  ಬಾಗಿಲಿಗೆ ಅಥವಾ ದೇವರ ಪೀಠದ ಬಳಿ ಗೋಡೆಗೆ " ಶುಭ - ಲಾಭ" ಅಂತ ಬರೆಯಿರಿ. ಸ್ವಸ್ತಿಕವನ್ನು ಬಿಡಿಸಿರಿ. ಕೆಳಗೆ ಹೇಳಿದ ಎಲ್ಲಾ ಪೂಜೆಯ ವಸ್ತುಗಳನ್ನು ಸರಿಯಾಗಿ ಜೋಡಿಸಿಕೊಳ್ಳಿರಿ. ದೇವರ ಪೀಠದ ಮೇಲೆ ಅಥವಾ ನೆಲಕ್ಕೆ ಬಟ್ಟೆ ಹಾಸಿ ಅದರ ಮೇಲೆ ಹರಿವಾಣ (ದೊಡ್ಡದಾದ ಬಟ್ಟಲು) ಇಟ್ಟು ಅದರಲ್ಲಿ ಅಕ್ಕಿ ಹಾಕಿರಿ. ಅದರ ಮೇಲೆ ಮುಕ್ಕಾಲು ಭಾಗ ನೀರು ತುಂಬಿದ ತಂಬಿಗೆ ಇಟ್ಟು ಅದರೊಳಗೆ ಒಂದು ಅಡಿಕೆ, ಒಂದು ಚಿಲ್ಲರೆ ರೂಪಾಯಿ, ಹೂವು, ದೂರ್ವೆ, ಗಂಧ ಹಾಕಿರಿ. ತಂಬಿಗೆಯಲ್ಲಿ ಐದು ಮಾವಿನೆಲೆಗಳ ಪಲ್ಲವವನ್ನು ಹಾಕಿ ಅದರ ಮೇಲೆ ಜುಟ್ಟು ಮೇಲೆ ಬರುವಂತೆ ತೆಂಗಿನಕಾಯಿ ಇಡಿರಿ. ಲಕ್ಷ್ಮಿಯ ಮೂರ್ತಿ ಇದ್ದಲ್ಲಿ ಕಲಶದ ಮುಂದೆ ಇಡಬೇಕು. ಫೋಟೋ ಇದ್ದಲ್ಲಿ ಕಲಶದ ಹಿಂದೆ ನಿಲ್ಲಿಸಿರಿ. ಅದರ ಎದುರಿಗೆ ಮಣೆ ಹಾಕಿಕೊಂಡು ಪಂಚಪಾತ್ರೆ ಇಟ್ಟುಕೊಂಡು ಪೂಜೆಗೆ ಬೇಕಾದ ಸಾಮಗ್ರಿಗಳೂ ಕೈಗೆ ಸಿಗುವಂತೆ ಹತ್ತಿರದಲ್ಲಿ ಇಟ್ಟುಕೊಂಡು ಕುಳಿತುಕೊಳ್ಳಿರಿ.

ಅವಶ್ಯ ಸಾಮಗ್ರಿಗಳು : 

ಮಹಾಲಕ್ಷ್ಮಿಯ ಫೋಟೋ, ಕಲಶ, ಮೂರ್ತಿ. ( ನಿಮ್ಮ ಪದ್ಧತಿಗೆ ತಕ್ಕಂತೆ).
ಗಣಪತಿಯ ಪೂಜೆಮಾಡಲು ಗಣಪತಿಯ ಮೂರ್ತಿ ಅಥವಾ ಫೋಟೋ. ಕೆಲವೆಡೆ ಅಕ್ಕಿಯ ಮೇಲೆ ತೆಂಗಿನಕಾಯಿ ಇಟ್ಟು ಅದಕ್ಕೇ ಪೂಜೆ ಮಾಡುತ್ತಾರೆ.
ಒಂದು ತಟ್ಟೆಯಲ್ಲಿ ಹಣ ( ಪೂಜಿಸಲಿಕ್ಕೆ. ).
ದೀಪ ( ದೇವರ ಎದುರಿನಲ್ಲಿ ದೀಪಗಳನ್ನು ಹಚ್ಚಿಡಿ.).
ರಂಗೋಲಿ ( ಪೂಜೆಯ ಸ್ಥಳವನ್ನು ರಂಗೋಲಿ ಹಾಕಿ ಅಲಂಕರಿಸಿರಿ.).
ಒಂದು ಹರಿವಾಣ ಅಥವಾ ಬಟ್ಟಲಿನಲ್ಲಿ- ಹೂವುಗಳು, ದೂರ್ವೆ, ತುಳಸಿ, ಗಂಧ / ಅಷ್ಟಗಂಧ, ಅರಿಶಿನ - ಕುಂಕುಮ, ಅಕ್ಷತೆ (ಶುದ್ಧ ಅಕ್ಕಿ), ಜನಿವಾರ 1, ಹತ್ತಿಯ ಗೆಜ್ಜೆವಸ್ತ್ರ 2
ರೇಶ್ಮೆ ಅಥವಾ ಹತ್ತಿಯ ರವಿಕೆ ವಸ್ತ್ರ ಅಥವಾ ಮಹಾಲಕ್ಷ್ಮಿಗೆ ಸಮರ್ಪಿಸಲು ಯಾವುದೇ ವಸ್ತ್ರ. 
ಮಂಗಲಸೂತ್ರ, ಬಳೆಗಳು, ಇತ್ಯಾದಿ ಉಡಿಯ ವಸ್ತುಗಳು.
ಪಂಚಾಮೃತ ( ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ - ಇವುಗಳನ್ನು ಒಂದು ಸಣ್ಣ ಪಾತ್ರೆಯಲ್ಲಿ ಬೆರೆಸಿ ಇಡಿ.)
ಆರತಿಗಳು. ( ಅನುಕೂಲಕ್ಕೆ ತಕ್ಕಂತೆ ಆರತಿ ಪಾತ್ರೆಗಳಿಗೆ ಬತ್ತಿಗಳನ್ನು ಹಾಕಿ ಸಿದ್ಧಪಡಿಸಿ. ಕರ್ಪೂರದ ಬೆಳಗುವ ಆರತಿ ಅವಶ್ಯ.)
ಆಸನ. ( ಮಣೆ ಅಥವಾ ಚಾಪೆ ).
ಗಂಟೆ.
ನೀರಿನ ತಂಬಿಗೆ ( ಮಹಾಲಕ್ಷ್ಮಿಯ ಕಲಶಕ್ಕೆ ಬಳಸಿದ ತಂಬಿಗೆ ಬಿಟ್ಟು ಇನ್ನೊಂದು, ಪೂಜೆಯ ನೀರಿಗೆ)
ಪಂಚಪಾತ್ರೆ ( ತಾಮ್ರದ ಲೋಟ, ಉದ್ಧರಣೆ ಅಥವಾ ಚಮಚ, ಅರ್ಘ್ಯಪಾತ್ರೆ ಅಥವಾ ಬಟ್ಟಲು)
ಒಂದು ಖಾಲಿ ಬಟ್ಟಲು, ಅಭಿಷೇಕ , ಮಾಡುವಾಗ ಬೇಕು.
ಅಕ್ಕಿ, ಸುಮಾರು ಎರಡು ಸೇರು.
ತೆಂಗಿನಕಾಯಿ 2.
ತಿನ್ನುವ ಎಲೆ, ಮತ್ತು ಅಡಿಕೆಗಳು.
ಬಾಳೆಹಣ್ಣು ಮತ್ತು ಇತರೆ ಹಣ್ಣುಗಳು. ಇವನ್ನು ದೇವಿಯ ಕಲಶದ ಸುತ್ತ ಪೀಠದ ಮೇಲೆ ಜೋಡಿಸಿರಿ. 
ಮಾವಿನೆಲೆಗಳು.
ಅಗರಬತ್ತಿ, ಕರ್ಪೂರ, ಬತ್ತಿಗಳು, ಹೂಬತ್ತಿ.
ನೈವೇದ್ಯಕ್ಕಾಗಿ ಸಿಹಿ, ಇತರೆ ಖಾದ್ಯಗಳು.
ಚಿಲ್ಲರೆ ನಾಣ್ಯಗಳು.
ಅಗರಬತ್ತಿ ಹಚ್ಚಲು ಬೇಕಾಗುವ Stand.
            

ಇವಿಷ್ಟೂ ತಯಾರಿ ಆದನಂತರ ಪೂಜೆ ಶುರುಮಾಡಲು ಕೆಳಗಿನ ಬಟನ್ ಒತ್ತಿರಿ




ಕೊರೊನಾ ಕಾಲದಲ್ಲಿ ಗೋವಾ ಮತ್ತು ಮಹಾರಾಷ್ಟ್ರಗಳಲ್ಲಿ ಜನರು ಅತ್ಯಂತ ಸಂಭ್ರಮ, ಭಕ್ತಿ ಭಾವಗಳಿಂದ ಆಚರಿಸುವ ಗಣೇಶ ಚತುರ್ಥಿ ಹಬ್ಬಕ್ಕೆ ಪುರೋಹಿತರು ಹೋಗುವುದು ಅಸಾಧ್ಯವಾದಾಗ, ಜನರ ಪೂಜೆಯ ಅನುಕೂಲಕ್ಕಾಗಿ ಇಂತಹದ್ದೊಂದು ಯೋಜನೆಯನ್ನು ಪ್ರಾರಂಭಿಸಿದೆವು. ಅದಾದ ನಂತರ ನಮಗೆ ಇಂತಹದ್ದೊಂದು ಯೋಜನೆ ಕೆಲವು ನಗರ ಪ್ರದೇಶಗಳಲ್ಲಿ ಮತ್ತು ವಿದೇಶಗಳಲ್ಲಿ ಇರುವವರಿಗೆ ಎಷ್ಟು ಪ್ರಯೋಜನಕಾರಿ ಅನ್ನುವುದು ಅರಿವಿಗೆ ಬಂತು. ಹಾಗಾಗಿ ಯಾರಿಗೆ ಪುರೋಹಿತರು ಲಭ್ಯವಿಲ್ಲವೋ, ಆದರೂ ಪೂಜೆ ಪುನಸ್ಕಾರಗಳಲ್ಲಿ ಶ್ರದ್ಧೆ ಆಸಕ್ತಿ ಹೊಂದಿದ್ದಾರೋ, ಅಂತಹವರಿಗಾಗಿ ನಾವು ಇದನ್ನು ನಡೆಸುತ್ತಾ ಇದ್ದೇವೆ. ಈ ಕೆಲಸದಲ್ಲಿ ಶ್ರಮ ಮತ್ತು ಖರ್ಚು ಎರಡೂ ಬಹಳ ಇವೆ. ನೀವು ಮನಸ್ಸಿದ್ದಲ್ಲಿ ಸಾಧ್ಯವಾದ ಸಹಾಯ ಮಾಡಬಹುದು. ಯಾವುದೇ ಜಾಹೀರಾತುಗಳಿಂದ ಮುಕ್ತವಾದ ಈ WebApp ನಡೆಸಲು ನೀವು ಕೊಡುವ Donation ಏಕಮಾತ್ರ ಆಧಾರವಾಗಿದೆ. Gpay / PhonePe / PayPal ಅಥವಾ ಇನ್ನವುದೇ ರೀತಿಯಲ್ಲೂ Donate ಮಾಡಬಹುದು.



Copyrights reserved.Privacy Terms & Conditions