Me

ಪುರೋಹಿತರು ನಿಮ್ಮೆದುರಿನಲ್ಲಿ!.

ಶ್ರೀ ಲಕ್ಷ್ಮೀ ಪೂಜಾ ವಿಧಾನ

also available in : मराठी हिंदी

ವಿ.ಸೂ. : ಶಾಸ್ತ್ರಜ್ಞರಾದ ಪುರೋಹಿತರ ಸಹಾಯದಿಂದ ಪೂಜೆ ನಡೆಸುವುದು ಪರಂಪರಾನುಗತ ಸರಿಯಾದ ಪದ್ಧತಿಯಾಗಿದೆ. ಈ WebApp ಯಾರಿಗೆ ಪುರೋಹಿತರು ಲಭ್ಯವಿಲ್ಲವೋ, ಅಂತವರಿಗಾಗಿ ಮಾತ್ರವಾಗಿದೆ. ಹೊರದೇಶದಲ್ಲಿರುವವರು, ಅಥವಾ ಪುರೋಹಿತರ ಅಭಾವ ಇರುವವರು ಮಾತ್ರ ಇದನ್ನು ಬಳಸಬಹುದು.


Share this webApp with your friends and family :


ಮಣೆ ಅಥವಾ ಆಸನದ ಮೇಲೆ ಕುಳಿತು ಮನಸಾರೆ ಮಹಾಗಣಪತಿ, ಗುರು, ತಂದೆ ತಾಯಿ ಇವರನ್ನು ಸ್ಮರಿಸಿ.


ಆಚಮನ ಮಾಡಿ. ( ಮೂರು ಸಲ ಉದ್ಧರಣೆಯಿಂದ(ಚಮಚ) ನೀರನ್ನು ಬಲಗೈಗೆ ಹಾಕಿಕೊಂಡು ಅದನ್ನು ಸೇವಿಸುವುದು.)


ಇನ್ನೊಮ್ಮೆ ಉದ್ಧರಣೆ(ಚಮಚ) ನೀರು ಬಲಗೈಗೆ ಹಾಕಿಕೊಂಡು ಅದನ್ನ ಬಟ್ಟಲಲ್ಲಿ ಬಿಡಿ.


ಕೈಮುಗಿದು ದೇವರಿಗೆ ನಮಸ್ಕಾರ ಮಾಡಿರಿ.


ಹಣೆಗೆ ಗಂಧ / ತಿಲಕ ಅಥವಾ ಭಸ್ಮವನ್ನು ಹಚ್ಚಿಕೊಳ್ಳಿರಿ.


ಘಂಟೆ ಪೂಜೆ : ದೇವರ ಘಂಟೆಯನ್ನು ಎದುರಿಗೆ ಇಟ್ಟುಕೊಂಡು ಅದರ ಮೇಲೆ ಒಂದು ಉದ್ಧರಣೆ ನೀರು ಹಾಕಿ, ಹೂವು ಅಕ್ಷತೆ ಇಟ್ಟು ಅರ್ಚಿಸಿ. ನಂತರ ಘಂಟಾನಾದ ಮಾಡಿ.


ಭೂಮಿ ಪೂಜೆ : ತಮ್ಮ ಎದುರಿಗೆ ಭೂಮಿಯ ಮೇಲೆ ಹೂವು ಅಕ್ಷತೆ ಹಾಕಿ ನಮಸ್ಕಾರ ಮಾಡಿ.


ಆಸನ ವಂದನೆ : ಕುಳಿತಿರುವ ಮಣೆ / ಆಸನದ ಮೇಲೆ ಅಕ್ಷತೆ ಹಾಕಿ ನಮಸ್ಕಾರ ಮಾಡಿ.


ದೀಪ ವಂದನೆ : ಒಂದು ಹೂವಿಗೆ ಅರಿಶಿನ-ಕುಂಕಮ ಹಚ್ಚಿ ಅದನ್ನು ದೀಪಕ್ಕೆ ಇಟ್ಟು ನಮಸ್ಕಾರ ಮಾಡಿ.


ಕೈಯಲ್ಲಿ ಅಕ್ಷತೆ ತೆಗೆದುಕೊಂಡು ಕೈ ಜೋಡಿಸಿ ನಮಸ್ಕಾರ ಮಾಡಿ. ಮನಸ್ಸಿನಲ್ಲಿ ಕುಲದೇವರು, ಗ್ರಾಮದೇವರು ಇತ್ಯಾದಿಯಾಗಿ ಎಲ್ಲ ದೇವರಿಗೆ ನಮಸ್ಕಾರ ಮಾಡಿ. ಕೈಯಲ್ಲಿರುವ ಅಕ್ಷತೆಯನ್ನು ದೇವರ ಮೇಲೆ ಹಾಕಿರಿ.


ಎಡಗೈಯಲ್ಲಿ ಅಕ್ಷತೆ, ತುಳಸಿ ಎಲೆ ತೆಗೆದುಕೊಂಡು ಅದಕ್ಕೆ ಒಂದು ಉದ್ಧರಣೆ ನೀರು ಸೇರಿಸಿ, ಎಡಗೈ ಮೇಲೆ ಬಲಗೈ ಇಟ್ಟು ಮುಚ್ಚಿರಿ. ಎರಡೂ ಕೈಗಳನ್ನು ಬಲಗಾಲಿನ ಮಂಡಿಯ ಮೇಲೆ ಇಟ್ಟುಕೊಳ್ಳಿ. ( ಚಿತ್ರದಲ್ಲಿ ತೋರಿಸಿರುವಂತೆ.)


ಈ ಆಡಿಯೋದಲ್ಲಿ ಹೇಳಿರುವಂತೆಯೇ ನೀವೂ ಕೂಡಾ ಹೇಳಿ.


ಎಡಗೈಯಲ್ಲಿರುವ ತುಳಸಿ ಅಕ್ಷತೆಗಳನ್ನು ಬಲಗೈಗೆ ತೆಗೆದುಕೊಂಡು ಅದಕ್ಕೆ ಮತ್ತೊಮ್ಮೆ ಒಂದು ಉದ್ಧರಣೆ ನೀರು ಸೇರಿಸಿ ಬಟ್ಟಲಿನಲ್ಲಿ ಬಿಡಿ.


ನಿರ್ವಿಘ್ನತೆಗಾಗಿ ಮೊದಲು ಗಣಪತಿಯ ಪೂಜೆಯನ್ನು ಮಾಡಬೇಕು. ಅವರವರ ಪದ್ಧತಿಯಂತೆ ಗಣಪತಿಯ ಮೂರ್ತಿ, ಫೋಟೋ ಇಟ್ಟುಕೊಂಡು ಅಥವಾ ಅಕ್ಕಿಯ ಮೇಲೆ ತೆಂಗಿನಕಾಯಿ ಇಟ್ಟುಕೊಂಡು ಅದಕ್ಕೆ ಪೂಜೆ ಮಾಡಬಹುದು..

ಕೈಯಲ್ಲಿ ದೂರ್ವಾ, ಅಕ್ಷತೆ ತೆಗೆದುಕೊಂಡು ವಿಘ್ನನಿವಾರಕ ಮಹಾಗಣಪತಿಯ ಸ್ಮರಣೆ ಮಾಡಿ.


ಕೈಯಲ್ಲಿರುವ ದೂರ್ವಾಕ್ಷತೆಗಳನ್ನು ಗಣಪತಿಗೆ ಸಮರ್ಪಿಸಿ.


ಗಣಪತಿಗೆ ಇನ್ನೊಮ್ಮೆ ಅಕ್ಷತೆಗಳನ್ನು ಹಾಕಿರಿ.


ಮೂರು ಬಾರಿ ಉದ್ಧರಣೆಯಿಂದ ಬಲಗೈಗೆ ನೀರು ಹಾಕಿಕೊಂಡು ಅದನ್ನು ಬಟ್ಟಲಿನಲ್ಲಿ ಬಿಡಿ.


ಒಂದು ಹೂವಿಗೆ ನೀರು ಹಾಕಿಕೊಂಡು ಆ ಹೂವಿನಿಂದ ಗಣಪತಿಗೆ ಅಭಿಷೇಕಾರ್ಥವಾಗಿ ನೀರನ್ನು ಪ್ರೋಕ್ಷಣೆ ಮಾಡಿ ( ಸಿಂಪಡಿಸಿ).


ಗಣಪತಿಗೆ ಹತ್ತಿಯಿಂದ ಮಾಡಿದ ಗೆಜ್ಜೆವಸ್ತ್ರವನ್ನು ಸಮರ್ಪಿಸಿ.


ಗಣಪತಿಗೆ ಗಂಧ ಮತ್ತು ಕುಂಕುಮವನ್ನು ಹಚ್ಚಿರಿ.


ಅಕ್ಷತೆ, ದೂರ್ವೆ ಮತ್ತು ಕೆಂಪು ಬಣ್ಣದ ಹೂವನ್ನು ಗಣಪತಿಗೆ ಸಮರ್ಪಿಸಿ.


ಧೂಪದಬತ್ತಿ / ಅಗರಬತ್ತಿಯನ್ನು ಹಚ್ಚಿಕೊಳ್ಳಿ. ಎಡಗೈಯಲ್ಲಿ ಘಂಟಾನಾದ ಮಾಡುತ್ತಾ ಬಲಗೈಯಿಂದ ಗಣಪತಿಗೆ ತೋರಿಸಿರಿ.


ಗಣಪತಿಯ ಬಲಕ್ಕೆ ಎರಡು ಎಲೆ ಮತ್ತು ಒಂದು ಅಡಿಕೆಯ ತಾಂಬೂಲ ಇಟ್ಟುಕೊಳ್ಳಿ. ಜೊತೆಗೆ ಬಾಳೆಹಣ್ಣು ಅಥವಾ ಬೆಲ್ಲದಚ್ಚಿನ ನೈವೇದ್ಯ ಇಟ್ಟುಕೊಳ್ಳಿ. ನೈವೇದ್ಯಕ್ಕೆ ತುಳಸಿಯಿಂದ ನೀರು ಪ್ರೋಕ್ಷಣೆ ಮಾಡಿ.(ಸಿಂಪಡಿಸಿ).
ಬಲಗೈಯಲ್ಲಿ ಹೂವು ತೆಗೆದುಕೊಂಡು ಅದಕ್ಕೆ ಒಂದು ಉದ್ಧರಣೆ ನೀರು ಸೇರಿಸಿ, ನೈವೇದ್ಯದ ಸುತ್ತಲೂ ಪ್ರದಕ್ಷಿಣಾಕಾರವಾಗಿ(clockwise) ಮೂರು ಬಾರಿ ಸುತ್ತಿಗಟ್ಟಿ ಆ ಹೂವನ್ನು ಗಣಪತಿಗೆ ಸಮರ್ಪಿಸಿ. ನೈವೇದ್ಯವನ್ನು ಸ್ವೀಕರಿಸುವಂತೆ ಮನಸ್ಸಿನಲ್ಲಿ ಪ್ರಾರ್ಥಿಸಿ.


ಮೂರು ಬಾರಿ ಉದ್ಧರಣೆಯಿಂದ ಬಲಗೈಗೆ ನೀರು ಹಾಕಿಕೊಂಡು ಅದನ್ನು ಬಟ್ಟಲಿನಲ್ಲಿ ಬಿಡಿ.


ಗಣಪತಿಯ ಎದುರಿಗಿಟ್ಟ ತಾಂಬೂಲದ ಮೇಲೆ ಒಂದು ಉದ್ಧರಣೆ ನೀರು ಬಿಡಿ.


ಕರ್ಪೂರದ ಆರತಿ ಹಚ್ಚಿಕೊಂಡು ಘಂಟಾನಾದ ಮಾಡುತ್ತಾ ಗಣಪತಿಗೆ ತೋರಿಸಿರಿ.


ಬಲಗೈಗೆ ಒಂದು ಉದ್ಧರಣೆ ನೀರು ಹಾಕಿಕೊಂಡು ಬಟ್ಟಲಿನಲ್ಲಿ ಬಿಡಿ. ಕೈಯಲ್ಲಿ ಎರಡು ಹೂಗಳನ್ನು ಹಿಡಿದುಕೊಂಡು ಗಣಪತಿಗೆ ನಮಸ್ಕಾರ ಮಾಡಿ.

ಕೈಯಲ್ಲಿರುವ ಹೂಗಳನ್ನು ಗಣಪತಿಗೆ ಸಮರ್ಪಿಸಿ ನಮಸ್ಕಾರ ಮಾಡಿ.


ಕೈಯಲ್ಲಿ ಅಕ್ಷತ ತೆಗೆದುಕೊಂಡು ನಮಸ್ಕಾರ ಮಾಡಿ ಗಣಪತಿಗೆ ಹಾಕಿರಿ.


ತೆಂಗಿನಕಾಯಿಯ ಮೇಲೆ ಗಣಪತಿಯ ಪೂಜೆ ಮಾಡಿದ್ದಲ್ಲಿ ಅದರ ಮೇಲೆ ಅಕ್ಷತೆ ಹಾಕಿರಿ.


ನಿರ್ವಿಘ್ನತೆಯ ಸಿದ್ಧಿಗಾಗಿ ಮಹಾಗಣಪತಿಯ ಪೂಜೆ ಮಾಡಿದ್ದಾಯಿತು. ಮುಂದಿನ ಲಕ್ಷ್ಮೀ ಪೂಜೆಗಾಗಿ ಕೆಳಗೆ ನೋಡಿರಿ.


ಕಲಶಾರ್ಚನೆ :
ಪೂಜೆಗಾಗಿ ಬಳಸುವ ನೀರಿನ ತಂಬಿಗೆಯ ಒಳಗೆ ತುಳಸಿ, ಗಂಧ, ಹೂವುಗಳನ್ನು ಹಾಕಿ ಬಲಗೈಯಿಂದ ತಂಬಿಗೆಯನ್ನು ಮುಚ್ಚಿ ಹಿಡಿದುಕೊಳ್ಳಿರಿ. ತಂಬಿಗೆಗೆ ಹೊರಗಿನಿಂದ ಅರಿಶಿನ-ಕುಂಕುಮ ಹಚ್ಚಿರಿ.


ಮಂಟಪಾರ್ಚನೆ : ಕೈಯಲ್ಲಿ ಅಕ್ಷತೆ ತೆಗೆದುಕೊಂಡು ಪೂಜೆಗಾಗಿ ಸಿದ್ಧಪಡಿಸಿರುವ ಮಂಟಪ(ಮಂಟಪ ಇಲ್ಲವಾದರೆ ಮನಸ್ಸಿನಲ್ಲೇ ಕಲ್ಪಿಸಿಕೊಳ್ಳಿ.)ದ ಮೇಲೆ ಹಾಕಿರಿ.


ಮಹಾಲಕ್ಷ್ಮಿಯ ಪೂಜೆಗಾಗಿ ಪೂಜೆಯ ಕಲಶ, ಫೋಟೋ ಮುಂತಾದವುಗಳನ್ನು ಸಿದ್ಧಪಡಿಸಿ ಸ್ಥಾಪನೆ ಮಾಡಿಕೊಂಡು ಪಕ್ಕದಲ್ಲಿ ಪೂಜಾ ಸಾಮಗ್ರಿಗಳ ಪಾತ್ರೆಯನ್ನೂ ಇಟ್ಟುಕೊಂಡು, ಎಷ್ಟು ಸಾಧ್ಯವೋ ಅಷ್ಟು ಪೂಜೆಯ ಕಲಶಕ್ಕೆ ಹತ್ತಿರವಾಗಿ ಕುಳಿತುಕೊಳ್ಳಿರಿ.


ಎರಡೂ ಕೈಗಳಿಂದ ಭೂಮಿಯನ್ನು ಸ್ಪರ್ಶಿಸಿ.


ಎರಡೂ ಕೈಗಳಿಂದ ದೇವರ ಕಲಶವನ್ನು ಸ್ಪರ್ಶಿಸಿ. ಕೈಯನ್ನು ಹಾಗೇ ಹಿಡಿದುಕೊಳ್ಳಿ.


ಬಲಗೈಯಲ್ಲಿ ಅಕ್ಷತೆ ತೆಗೆದುಕೊಂಡು ಕಲಶದ ಮೇಲೆ ಹಾಕಿರಿ. ಮನಸ್ಸಿನಲ್ಲಿ ವರುಣದೇವರ ಸ್ಮರಣೆ ಮಾಡಿ.


ಕಲಶಕ್ಕೆ ಗಂಧ, ಅರಿಶಿನ - ಕುಂಕುಮಗಳನ್ನು ಹಚ್ಚಿ ಒಂದು ಹೂವನ್ನು ಸಮರ್ಪಿಸಿ.


ಮತ್ತೊಮ್ಮೆ ಎರಡೂ ಕೈಗಳಿಂದ ದೇವರ ಕಲಶವನ್ನು ಸ್ಪರ್ಶಿಸಿ. ಕೈಯನ್ನು ಹಾಗೇ ಹಿಡಿದುಕೊಳ್ಳಿ.


ಕೈಯಲ್ಲಿ ಹೂವು ಅಕ್ಷತೆಗಳನ್ನು ತೆಗೆದುಕೊಂಡು ಮನಸಾರೆ ಶ್ರೀ ಮಹಾಲಕ್ಷ್ಮೀ ದೇವಿಯನ್ನು ಸ್ಮರಿಸಿ. ಹೂವು ಅಕ್ಷತೆಗಳನ್ನು ಮಹಾಲಕ್ಷ್ಮೀ ದೇವಿಗೆ ಸಮರ್ಪಣೆ ಮಾಡಿ.


ಬಲಗೈಯಲ್ಲಿ ಅಕ್ಷತೆ ತೆಗೆದುಕೊಂಡು ಮಹಾಲಕ್ಷ್ಮಿಗೆ ಸಮರ್ಪಿಸಿ.


ಇನ್ನೊಮ್ಮೆ ಬಲಗೈಯಲ್ಲಿ ಅಕ್ಷತೆ ತೆಗೆದುಕೊಂಡು ಮಹಾಲಕ್ಷ್ಮಿಗೆ ಸಮರ್ಪಿಸಿ.


ಕೈಯಲ್ಲಿ ಹೂವು ತೆಗೆದುಕೊಂಡು ಅದಕ್ಕೆ ಒಂದು ಉದ್ಧರಣೆ ನೀರು ಸೇರಿಸಿ ಬಟ್ಟಲಿನಲ್ಲಿ ಬಿಡಿ.


ಕೈಯಲ್ಲಿ ಗಂಧ ಹಚ್ಚಿದ ಹೂವು ತೆಗೆದುಕೊಂಡು ಅದಕ್ಕೆ ಒಂದು ಉದ್ಧರಣೆ ನೀರನ್ನು ಸೇರಿಸಿ ಬಟ್ಟಲಿನಲ್ಲಿ ಬಿಡಿ.


ಬಲಗೈಯಲ್ಲಿ ಉದ್ಧರಣೆ ತೆಗೆದುಕೊಂಡು ನೀರನ್ನು ಬಟ್ಟಲಿನಲ್ಲಿ ಬಿಡಿ.


ಒಂದು ಹೂವಿಗೆ ನೀರು ಹಾಕಿಕೊಂಡು ಹೂವಿನಿಂದ ಮಹಾಲಕ್ಷ್ಮಿಗೆ ನೀರನ್ನು ಪ್ರೋಕ್ಷಿಸಿ(ಸಿಂಪಡಿಸಿ).


ಹೂವು ಅಥವಾ ತುಳಸಿಯನ್ನು ಪಂಚಾಮೃತದಲ್ಲಿ ಅದ್ದಿ ಅದನ್ನು ದೇವಿಗೆ ಪ್ರೋಕ್ಷಿಸಿ. ಮಹಾಲಕ್ಷ್ಮಿಯ ಮೂರ್ತಿ ಇದ್ದಲ್ಲಿ ಅದನ್ನು ಒಂದು ಬಟ್ಟಲು ಅಥವಾ ಅಭಿಷೇಕ ಪಾತ್ರೆಯಲ್ಲಿ ಇಟ್ಟುಕೊಂಡು ಅಭಿಷೇಕ ಮಾಡಬಹುದು.


ಮಹಾಲಕ್ಷ್ಮಿಗೆ ಶ್ರೀಸೂಕ್ತ ಮಂತ್ರದಿಂದ ಅಭಿಷೇಕ ಮಾಡುವುದು ಉತ್ತಮವಾದದ್ದು. ದೇವಿಯ ಮೂರ್ತಿಯನ್ನು ಇಟ್ಟುಕೊಂಡು ಮಂತ್ರ ಶ್ರವಣ ಮಾಡುತ್ತಾ ಅಭಿಷೇಕ ಮಾಡಬಹುದು ಅಥವಾ ಕೈಮುಗಿದು ಕುಳಿತುಕೊಂಡು ಮಂತ್ರಶ್ರವಣ ಮಾಡಬಹುದು. ಶ್ರೀ ಸೂಕ್ತ ಮಂತ್ರಕ್ಕಾಗಿ ಈ ಕೆಳಗಿನ ಬಟನ್ ಒತ್ತಿರಿ, ಅಥವಾ ಮುಂದುವರೆಯಿರಿ.


ಮಹಾಲಕ್ಷ್ಮಿಗೆ ಗೆಜ್ಜೆವಸ್ತ್ರವನ್ನು ಸಮರ್ಪಿಸಿ. ಕಲಶದ ಮೇಲೆ ರೇಶ್ಮೆ ಅಥವಾ ಹತ್ತಿಯ ಇನ್ಯಾವುದೇ ವಸ್ತ್ರವನ್ನೂ ಸಮರ್ಪಣೆ ಮಾಡಬಹುದು.


ಮಂಗಲಸೂತ್ರ, ಬಳೆ ಅಥವಾ ಇನ್ಯಾವುದೇ ಆಭರಣವಿದ್ದಲ್ಲಿ ಮಹಾಲಕ್ಷ್ಮಿಗೆ ಸಮರ್ಪಿಸಿ. ಇಲ್ಲವಾದಲ್ಲಿ ಅಕ್ಷತೆಯನ್ನೇ ಹಾಕಿರಿ.


ಮಹಾಲಕ್ಷ್ಮಿಗೆ ಗಂಧವನ್ನು ಸಮರ್ಪಿಸಿ.


ಮಹಾಲಕ್ಷ್ಮಿಗೆ ಅಕ್ಷತೆಗಳನ್ನು ಸಮರ್ಪಿಸಿ.


ಮಹಾಲಕ್ಷ್ಮಿಗೆ ಹೂವು ಮತ್ತು ಹೂವಿನ ಹಾರಗಳನ್ನು ಸಮರ್ಪಿಸಿ. ತುಳಸಿಯ ಎಲೆಗಳನ್ನೂ ಸಮರ್ಪಿಸಿ.


ಮಹಾಲಕ್ಷ್ಮಿಗೆ 108 ನಾಮಗಳಿಂದ ಕುಂಕುಮಾರ್ಚನೆ ಅಥವಾ ಪುಷ್ಪಾರ್ಚನೆ ಮಾಡಬಹುದು. ದೇವಿಯ ಮೂರ್ತಿಯನ್ನು ಬಟ್ಟಲಿನಲ್ಲಿ ಇಟ್ಟುಕೊಂಡು ಕುಂಕುಮದಿಂದ ಅರ್ಚಿಸಬಹುದು ಅಥವಾ ದೇವಿಯ ಕಲಶವನ್ನು ಹೂವುಗಳಿಂದ ಅರ್ಚಿಸಬಹುದು. 108 ನಾಮಮಂತ್ರಕ್ಕಾಗಿ ಈ ಬಟನ್ ಒತ್ತಿರಿ, ಅಥವಾ ಮುಂದುವರೆಯಿರಿ.


ಶ್ರೀ ಮಹಾಲಕ್ಷ್ಮಿಯ ಕಲಶದ ಜೊತೆಗೆ ಇಟ್ಟಿರುವ ಹಣದ ಮೇಲೂ ಅರಿಶಿನ-ಕುಂಕುಮ, ಹೂಗಳನ್ನು ಹಾಕಿ ಪೂಜಿಸಿ.


ಧೂಪದಬತ್ತಿ ಅಥವಾ ಅಗರಬತ್ತಿಯನ್ನ ಹಚ್ಚಿಕೊಂಡು ಎಡಗೈಯಲ್ಲಿ ಘಂಟಾನಾದ ಮಾಡುತ್ತಾ ಬಲಗೈಯಿಂದ ದೇವಿಗೆ ತೋರಿಸಿರಿ.


ತುಪ್ಪದ ದೀಪವನ್ನು ಹಚ್ಚಿಕೊಂಡು, ಘಂಟಾನಾದ ಸಹಿತವಾಗಿ ದೇವಿಗೆ ಅದನ್ನು ತೋರಿಸಿರಿ.


ಮಹಾಲಕ್ಷ್ಮಿಯ ನೈವೇದ್ಯಕ್ಕಾಗಿ ತಂದಿರುವ ಎಲ್ಲಾ ಪದಾರ್ಥಗಳನ್ನು ದೇವಿಯ ಎದುರಿಗೆ ಇಟ್ಟುಕೊಳ್ಳಿ. ತುಳಸಿ ಎಲೆಗೆ ನೀರು ಹಾಕಿಕೊಂಡು ಆ ನೀರನ್ನು ನೈವೇದ್ಯದ ಮೇಲೆ ಪ್ರೋಕ್ಷಣೆ ಮಾಡಿ.


ಹೂಗಳನ್ನು ತೆಗೆದುಕೊಂಡು ಅವುಗಳಿಗೆ ಸ್ವಲ್ಪ ನೀರು ಹಾಕಿಕೊಂಡು ಮೂರು ಬಾರಿ ನೈವೇದ್ಯದ ಸುತ್ತ ಸುತ್ತುಗಟ್ಟಿ ಹೂಗಳನ್ನು ದೇವಿಗೆ ಸಮರ್ಪಿಸಿ. ನೈವೇದ್ಯವನ್ನು ಸ್ವೀಕರಿಸುವಂತೆ ಪ್ರಾರ್ಥಿಸಿ.


ಮೂರು ಬಾರಿ ಉದ್ಧರಣೆಯಿಂದ ಬಲಗೈಗೆ ನೀರು ಹಾಕಿಕೊಂಡು ಅದನ್ನು ಬಟ್ಟಲಿನಲ್ಲಿ ಬಿಡಿ.


ಮಹಾಲಕ್ಷ್ಮಿಯ ಎದುರಿಗೆ ಎಲೆ ಅಡಿಕೆಗಳ ತಾಂಬೂಲ ಮತ್ತು ಅದರ ಮೇಲೆ ದಕ್ಷಿಣೆ ಇಟ್ಟು ಅದರ ಮೇಲೆ ಒಂದು ಉದ್ಧರಣೆ ನೀರು ಬಿಡಿ.


ಮಹಾಲಕ್ಷ್ಮಿಗೆ ಬತ್ತಿಯ ಆರತಿ ಬೆಳಗಿರಿ. (ಆರತಿ ಹಾಡು ಹಾಡಬಹುದು)


ಕರ್ಪೂರವನ್ನು ಹಚ್ಚಿಕೊಂಡು ಆರತಿ ಮಾಡಿರಿ.


ಕೈಗಳಿಗೆ ಒಂದು ಉದ್ಧರಣೆ ನೀರು ಹಾಕಿ ತೊಳೆದುಕೊಂಡು ಬಟ್ಟಲಿನಲ್ಲಿ ಬಿಡಿ. ಎರಡೂ ಕೈಗಳಿಂದ ಹೂಗಳನ್ನು ಹಿಡಿದುಕೊಂಡು ಕೈಮುಗಿದು ನಿಂತುಕೊಳ್ಳಿರಿ. ಹೂಗಳನ್ನು ದೇವಿಗೆ ಸಮರ್ಪಿಸಿ.


ದೇವಿಯ ಕಲಶದ ಬಳಿ ತಟ್ಟೆಯಲ್ಲಿ ಇಟ್ಟಿರುವ ಚಿನ್ನದ ವಸ್ತುಗಳು ಅಥವಾ ಹಣದ ಮೇಲೆ ಗಂಧ, ಅಕ್ಷತೆ, ಹೂವುಗಳನ್ನು ಹಾಕಿ ಪೂಜಿಸಿ. ಧನದ ದೇವತೆಯಾದ ಕುಬೇರನಿಗೆ ನಮಸ್ಕಾರ ಮಾಡಿ.


ಕುಟುಂಬ ಸಹಿತರಾಗಿ ದೇವಿಗೆ ಮೂರು ಅಥವಾ ಐದು ಪ್ರದಕ್ಷಿಣೆಗಳನ್ನು ಮಾಡಿ ಸಾಷ್ಟಾಂಗ ನಮಸ್ಕಾರ ಮಾಡಿರಿ.


ಹೂವು ಅಕ್ಷತೆಗಳನ್ನು ತೆಗೆದುಕೊಂಡು ಅದಕ್ಕೆ ಒಂದು ಉದ್ಧರಣೆ ನೀರು ಹಾಕಿ, ನೀರನ್ನು ಮಾತ್ರ ಬಟ್ಟಲಿನಲ್ಲಿ ಬಿಡಿ. ಹೂವು ಅಕ್ಷತೆಯನ್ನು ದೇವಿಗೆ ಸಮರ್ಪಿಸಿ.


ಮೂರು ಬಾರಿ "ವಿಷ್ಣವೇ ನಮಃ" ಎಂದು ಜಪ ಮಾಡಿ.


ಎರಡೂ ಕೈಗಳನ್ನು ಅಂಜಲಿಬದ್ಧವಾಗಿ ದೇವಿಯ ಎದುರು ಚಾಚಿ ಪ್ರಸಾದವನ್ನು ಬೇಡಿರಿ. ದೇವಿಯ ಚರಣಗಳ ಬಳಿಯಿಂದ ಹೂವು ಅಥವಾ ಹೂವಿನ ಪಕಳೆಯ ಪ್ರಸಾದ ತೆಗೆದುಕೊಂಡು ನೆತ್ತಿಯ ಮೇಲಿಟ್ಟುಕೊಳ್ಳಿ. ಉಳಿದವರಿಗೂ ಮುಡಿದುಕೊಳ್ಳಲು ಕೊಡಬಹುದು.


ಪ್ರತಿನಿತ್ಯ ಪೂಜಿಸದ ಮೂರ್ತಿ ಅಥವಾ ಕಲಶವನ್ನಿಟ್ಟು ಪೂಜೆ ಮಾಡಿದ್ದಲ್ಲಿ, ಅದರ ಮೇಲೆ ಅಕ್ಷತೆ ಹಾಕಿ ವಿಸರ್ಜನೆ ಮಾಡಿ. ನಿತ್ಯ ಪೂಜೆ ಮಾಡುವ ಮೂರ್ತಿಯಾಗಿದ್ದಲ್ಲಿ ವಿಸರ್ಜನೆ ಬೇಡ.


ಮತ್ತೆ ಆಚಮನ : ( ಮೂರು ಸಲ ಉದ್ಧರಣೆಯಿಂದ(ಚಮಚ) ನೀರನ್ನು ಬಲಗೈಗೆ ಹಾಕಿಕೊಂಡು ಅದನ್ನು ಸೇವಿಸುವುದು.)
ಇನ್ನೊಮ್ಮೆ ಉದ್ಧರಣೆ(ಚಮಚ) ನೀರು ಬಲಗೈಗೆ ಹಾಕಿಕೊಂಡು ಅದನ್ನ ಬಟ್ಟಲಲ್ಲಿ ಬಿಡಿ.


ಶ್ರೀ ಮಹಾಲಕ್ಷ್ಮೀ ಪೂಜೆಯು ಸಂಪನ್ನವಾಯಿತು.


ಕೊರೊನಾ ಕಾಲದಲ್ಲಿ ಗೋವಾ ಮತ್ತು ಮಹಾರಾಷ್ಟ್ರಗಳಲ್ಲಿ ಜನರು ಅತ್ಯಂತ ಸಂಭ್ರಮ, ಭಕ್ತಿ ಭಾವಗಳಿಂದ ಆಚರಿಸುವ ಗಣೇಶ ಚತುರ್ಥಿ ಹಬ್ಬಕ್ಕೆ ಪುರೋಹಿತರು ಹೋಗುವುದು ಅಸಾಧ್ಯವಾದಾಗ, ಜನರ ಪೂಜೆಯ ಅನುಕೂಲಕ್ಕಾಗಿ ಇಂತಹದ್ದೊಂದು ಯೋಜನೆಯನ್ನು ಪ್ರಾರಂಭಿಸಿದೆವು. ಅದಾದ ನಂತರ ನಮಗೆ ಇಂತಹದ್ದೊಂದು ಯೋಜನೆ ಕೆಲವು ನಗರ ಪ್ರದೇಶಗಳಲ್ಲಿ ಮತ್ತು ವಿದೇಶಗಳಲ್ಲಿ ಇರುವವರಿಗೆ ಎಷ್ಟು ಪ್ರಯೋಜನಕಾರಿ ಅನ್ನುವುದು ಅರಿವಿಗೆ ಬಂತು. ಹಾಗಾಗಿ ಯಾರಿಗೆ ಪುರೋಹಿತರು ಲಭ್ಯವಿಲ್ಲವೋ, ಆದರೂ ಪೂಜೆ ಪುನಸ್ಕಾರಗಳಲ್ಲಿ ಶ್ರದ್ಧೆ ಆಸಕ್ತಿ ಹೊಂದಿದ್ದಾರೋ, ಅಂತಹವರಿಗಾಗಿ ನಾವು ಇದನ್ನು ನಡೆಸುತ್ತಾ ಇದ್ದೇವೆ. ಈ ಕೆಲಸದಲ್ಲಿ ಶ್ರಮ ಮತ್ತು ಖರ್ಚು ಎರಡೂ ಬಹಳ ಇವೆ. ನೀವು ಮನಸ್ಸಿದ್ದಲ್ಲಿ ಸಾಧ್ಯವಾದ ಸಹಾಯ ಮಾಡಬಹುದು. ಯಾವುದೇ ಜಾಹೀರಾತುಗಳಿಂದ ಮುಕ್ತವಾದ ಈ WebApp ನಡೆಸಲು ನೀವು ಕೊಡುವ Donation ಏಕಮಾತ್ರ ಆಧಾರವಾಗಿದೆ. Gpay / PhonePe / PayPal ಅಥವಾ ಇನ್ನವುದೇ ರೀತಿಯಲ್ಲೂ Donate ಮಾಡಬಹುದು.


ನಿಮ್ಮ ಸಲಹೆ ಸೂಚನೆಗಳನ್ನು ಕೊಡಲು ಈ ಬಟನ್ ಕ್ಲಿಕ್ ಮಾಡಿ.


Copyrights reserved.Privacy Terms & Conditions
×

×